ಶ್ರೀನಗರದ ಗೊಟಪೋರಾ ಗ್ರಾಮದ ಪ್ರಸಿದ್ಧ ಎಂಬ್ರಾಯಿಡರಿ ಕೆಲಸಗಾರ ಮೊಹಮ್ಮದ್ ಸುಲ್ತಾನ್ ಅವರಿಗೆ ಮಸ್ಕ್ಯುಲರ್ ಡಿಸ್ಟ್ರೋಫಿ ಸಮಸ್ಯೆ ಇರುವ ಮಗನನ್ನು ನೋಡಿಕೊಳ್ಳುವುದು ಸವಾಲಾಗಿತ್ತು. ಅವರ ಮೂವರು ಪುತ್ರರು ನರ ಸಂಬಂಧಿತ ಅಸ್ವಸ್ಥತೆಯೊಂದಿಗೆ ಜನಿಸಿದರು. ಇದರಿಂದ ಸ್ನಾಯುಗಳು ಕ್ರಮೇಣ ಕ್ಷೀಣಿಸಲು ಕಾರಣವಾಗುತ್ತವೆ. ಈ ಎಲ್ಲದರಿಂದ 70 ವರ್ಷ ವಯಸ್ಸಿನ ಮೊಹಮ್ಮದ್ ಅವರು ಚಿಂತೆಗೊಳಗಾಗಿದ್ದರು.
ಮೊಹಮ್ಮದ್ ಅವರ ಕಿರಿಯ ಮಗ ತಾರಿಕ್ ಅಹ್ಮದ್ ಮಿರ್ (32) ಸೊಜ್ನಿ ಕಸೂತಿಯ ಕಾಶ್ಮೀರಿ ಸಂಪ್ರದಾಯವನ್ನು ಹೆಮ್ಮೆಯಿಂದ ಎತ್ತಿಹಿಡಿಯುತ್ತಾರೆ. ಈ ಪ್ರಶಸ್ತಿ ವಿಜೇತ ಕುಶಲಕರ್ಮಿ 2010 ರಲ್ಲಿ ಸ್ಪೆಷಲ್ ಹ್ಯಾಂಡ್ಸ್ ಆಫ್ ಕಾಶ್ಮೀರ್ ಎಂಬ ಸೂಜಿ ಕೆಲಸಗಾರರ ಗುಂಪನ್ನು ಸ್ಥಾಪಿಸಿದರು. "ನನ್ನಂತಹ ಇತರ ಅಂಗವಿಕಲ ಕುಶಲಕರ್ಮಿಗಳಿಗೆ ನಾನು ಅವಕಾಶಗಳನ್ನು ನೀಡಲು ಬಯಸುತ್ತೇನೆ" ಎಂದು ತಾರಿಕ್ ಹೇಳುತ್ತಾರೆ. ವಿಶೇಷ ಕರಕುಶಲದ ಮೂಲಕ ತಮ್ಮ ಜೀವನೋಪಾಯವನ್ನು ಗಳಿಸುವ ಕಾಶ್ಮೀರದ 40 ಕುಶಲಕರ್ಮಿಗಳಲ್ಲಿ 15 ಮಂದಿ ಅಂಗವಿಕಲರಾಗಿದ್ದಾರೆ ಎಂಬುದು ವಿಶೇಷ.
ತಾರಿಕ್‌ಗೆ ಶಿಕ್ಷಣ ಪಡೆಯುವುದು ದೊಡ್ಡ ಹರಸಾಹಸವಾಗಿತ್ತು. ಪ್ರಾಥಮಿಕ ಶಾಲೆಗೆ 2 ಕಿ ಮೀ ನಡೆದುಕೊಂಡು ಹೋಗಿದ್ದು, ಬದ್ಗಾಮ್‌ನಲ್ಲಿರುವ ತನ್ನ ಮಾಧ್ಯಮಿಕ ಶಾಲೆಗೆ ಬಸ್ಸು ಹತ್ತಲು ತೆಗೆದುಕೊಂಡ ಪ್ರಯತ್ನವನ್ನು ಅವರು ನೆನಪಿಸಿಕೊಳ್ಳುತ್ತಾರೆ. ಅವರು ವೈದ್ಯಕೀಯ ಅಧ್ಯಯನ ಮಾಡಲು ಬಯಸಿದ್ದರು. ಆದರೆ ಇದಕ್ಕೆ 20 ಕಿ ಮೀ ಬಸ್ ಪ್ರಯಾಣ ಮಾಡಬೇಕಿದ್ದರಿಂದ ಬದಲಿಗೆ ಕಲೆಯನ್ನು ಆಯ್ಕೆ ಮಾಡಿಕೊಂಡರು. ಶ್ರೀನಗರದಲ್ಲಿ ಒಂದು ವರ್ಷದ ಕಾಲೇಜಿನ ನಂತರ ದೂರ ಶಿಕ್ಷಣದ ಮೂಲಕ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ಮತ್ತು ಕಾಶ್ಮೀರ ವಿಶ್ವವಿದ್ಯಾಲಯದಿಂದ ಉರ್ದುವಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಬೋಧನೆ ಅವರ ಮಹತ್ವಾಕಾಂಕ್ಷೆಯಾಗಿತ್ತು ಆದರೆ ಅಂಗವೈಕಲ್ಯದಿಂದಾಗಿ ಒಂದೇ ಒಂದು ಉದ್ಯೋಗ ಪಡೆಯಲು ಸಾಧ್ಯವಾಗಲಿಲ್ಲ. ಅವರ ನೆಚ್ಚಿನ ಕವಿಗಳಾದ ಮಿರ್ಜಾ ಗಾಲಿಬ್ ಮತ್ತು ಅಲ್ಲಾಮ ಇಕ್ಬಾಲ್ ಅವರ ಹಿತವಾದ ಮಾತುಗಳು ಅವರ ಹೃದಯಕ್ಕೆ ಇಷ್ಟವಾಗುತ್ತವೆ.
ಬಾಲ್ಯದಲ್ಲಿ, ತಾರಿಕ್ ತನ್ನ ತಂದೆ ಪಶ್ಚಿಮಿನಾ ಶಾಲುಗಳನ್ನು ಕಸೂತಿ ಮಾಡುವುದನ್ನು ನೋಡುತ್ತಿದ್ದರು ಮತ್ತು ಮೂರು ತಿಂಗಳ ಶಾಲಾ ಚಳಿಗಾಲದ ರಜಾದಿನಗಳಲ್ಲಿ ತಂದೆಗೆ ಸಹಾಯ ಮಾಡಿದ್ದರು. ಆನಂತರ ಅದೇ ವೃತ್ತಿ ಕೈಗೊಳ್ಳಲು ನಿರ್ಧಸಿರಿದರು. ಮಧ್ಯವರ್ತಿಗಳು ಪಾವತಿಸಿದ ಅಲ್ಪ ಮೊತ್ತದಿಂದ ನಿರಾಶೆಗೊಂಡ ಅವರು ತಮ್ಮ ವ್ಯವಹಾರ ಮಾದರಿಯನ್ನು ಬದಲಾಯಿಸಿದರು. ತನ್ನ ರೂ 10,000 ಸ್ಕಾಲರ್‌ಶಿಪ್‌ನೊಂದಿಗೆ ಸ್ಮಾರ್ಟ್‌ಫೋನ್ ಖರೀದಿಸಿದ (ಆ ಹಣದಲ್ಲಿ ಒಂದು ವರ್ಷ ಬದುಕಬಹುದು ಎಂದು ಅವರ ಪೋಷಕರು ಅವನನ್ನು ಗದರಿಸಿದ್ದರು) ಮತ್ತು ಅವರ ಸೊಜ್ನಿ ಶಾಲುಗಳ ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದರು. ಶೀಘ್ರದಲ್ಲೇ ವಿವಿಧ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಿದರು. ಅವರ ತಂಡ ಹಲವಾರು ಪ್ರದರ್ಶನಗಳಲ್ಲಿ ಭಾಗವಹಿಸಿತು ಮತ್ತು ಅವರು ಫೆಲೋಶಿಪ್ ಮತ್ತು ರಾಷ್ಟ್ರೀಯ ಮನ್ನಣೆಯನ್ನೂ ಗಳಿಸಿದರು.
ತಾರಿಕ್ ಅವರ ಸಹೋದರ ನಜೀರ್ ಅಹ್ಮದ್ 2019 ರಲ್ಲಿ ನಿಧನರಾದರು. ಅವರ ಸಹೋದರ ಫಾರೂಕ್ ಅಹ್ಮದ್ ಶೇ 90 ಅಂಗವೈಕಲ್ಯ ಹೊಂದಿದ್ದು, ಅವರಿಗೆ ಲೆಕ್ಕಪತ್ರ ನಿರ್ವಹಣೆಗೆ ಸಹಾಯ ಮಾಡುತ್ತಾರೆ. ತಾರಿಕ್ ಕೇವಲ ಎರಡು ಗಂಟೆಗಳ ಅವಧಿಯ ವಿರಾಮಗಳೊಂದಿಗೆ ಬೆಳಗ್ಗೆ ಒಂಬತ್ತು ಗಂಟೆಯಿಂದ ರಾತ್ರಿ ಒಂಬತ್ತು ಗಂಟೆವರೆಗೆ ಕೆಲಸ ಮಾಡುತ್ತಾರೆ. ಇಕ್ಬಾಲ್ ಅವರ ವಾಟ್ಸಾಪ್ ಸ್ಟೇಟಸ್‌ನಲ್ಲಿನ ಶಾಯರಿಯ ಒಂದು ಸಾಲು, "ಸಿತಾರೋ ಸೆ ಆಗೇ ಜಹಾನ್ ಔರ್ ಭಿ ಹೈ" (ನಕ್ಷತ್ರಗಳ ಆಚೆಗೆ ಇತರ ಪ್ರಪಂಚಗಳು ಅಸ್ತಿತ್ವದಲ್ಲಿವೆ), ಅವರು ಅಪರಿಮಿತ ದಿಗಂತವನ್ನು ತಲುಪಲು ಅವರನ್ನು ಶಾಶ್ವತವಾಗಿ ಪ್ರೇರೇಪಿಸುತ್ತದೆ ಎಂಬುದು ಅರ್ಥಪೂರ್ಣವಾಗಿದೆ.