Icon to view photos in full screen

“ಸಮಾಜ, ಸುತ್ತಲಿನ ಜನ ಹೇಗೆಲ್ಲಾ ವರ್ತಿಸುವರೋ ಎಂಬ ಯೋಚನೆಯನ್ನು ಬದಿಗಿಟ್ಟು ಪೋಷಕರು ವಿಶೇಷಚೇತನ ಮಕ್ಕಳನ್ನು ಹೊರಜಗತ್ತಿಗೆ ಬಿಡಬೇಕು. ಆ ಮಕ್ಕಳು ಸಮಾಜದೊಂದಿಗೆ ಬೆರೆಯಲು ಇದರಿಂದ ಸಾಧ್ಯವಾಗುತ್ತದೆ”

ಬಹುತೇಕ ಸರಕಾರಿ ಉದ್ಯೋಗಿಗಳು ತಮ್ಮ 30 ದಿನಗಳ ವಾರ್ಷಿಕ ರಜೆ ದಿನಗಳನ್ನು ತಮ್ಮ ಕುಟುಂಬದೊಂದಿಗೆ ಕಳೆಯಲು ಇಚ್ಛಿಸುತ್ತಾರೆ. ಆದರೆ ಅಮೀರ್ ಸಿದ್ದಿಕಿ ಅವರು ಈ ವಿಷಯದಲ್ಲಿ ಭಿನ್ನರಾಗಿ ಕಾಣುತ್ತಾರೆ. ದಿಲ್ಲಿ ನಿವಾಸಿಯಾದ ಇವರು ಸರಕಾರಿ ಕಚೇರಿಯಲ್ಲಿ ಕಂಪ್ಯೂಟರ್ ಅಧಿಕಾರಿ. ತಮ್ಮ ಕೆಲಸ ಮಾಡಿಕೊಂಡು ಅವರು ಸುಮ್ಮನಿರಬಹುದಿತ್ತು. ಆದರೆ, ವಿಶೇಷಚೇತನರಲ್ಲಿ ಜಾಗೃತಿ ಹರಡಲು ಅವರು ಮುಂದಾಗಿದ್ದಾರೆ. ‘ರೈಡರ್ ಅಮೀರ್’ ಎಂದೇ ಖ್ಯಾತಿ ಪಡೆದಿರುವ ಅವರು, ತಮ್ಮ ರೆಟ್ರೊಫಿಟೆಡ್ ಸ್ಕೂಟರಿನಲ್ಲಿ 53,000 ಕಿ.ಮೀ ಸುತ್ತಾಟ ಮಾಡಿದ್ದಾರೆ. ಅವರು ಒಂಟಿಯಾಗಿ ಸುತ್ತಾಡುತ್ತಿಲ್ಲ. ತಮ್ಮ ‘ಈಗಲ್ ಸ್ಪೆಷಲಿ ಏಬಲ್ಡ್ ರೈಡರ್ಸ್’ ತಂಡದೊಂದಿಗೆ ಒಂದು ಆಂದೋಲನ ನಡೆಸುತ್ತಿದ್ದಾರೆ.

ತಮ್ಮ ಜೀವನದ ಬಹುಪಾಲು ವರ್ಷಗಳನ್ನು ಜಬಲ್ಪುರದಲ್ಲಿ ಕಳೆದಿರುವ ಅಮೀರ್, ಚಿಕ್ಕವರಾಗಿದ್ದಾಗಲೇ ಪೋಲಿಯೊ ರೋಗಕ್ಕೆ ತುತ್ತಾಗಿದ್ದರು. ಆಗ ಅವರು 18 ತಿಂಗಳ ಮಗು. ಅಮೀರ್ ಅವರ ತಂದೆಯೂ ಸರ್ಕಾರಿ ನೌಕರರು. ಟೆಲಿಕಾಂ ಕಂಪನಿಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‍ನಲ್ಲಿ ಅವರು ಕೆಲಸ ಮಾಡುತ್ತಿದ್ದರು. ತಮ್ಮ ಮಗನಿಗಾದ ಅವಸ್ಥೆಗೆ ಮರುಗುತ್ತಿದ್ದರು. ವಿಶೇಷಚೇತನ ಮಕ್ಕಳು ಮನೆಯಲ್ಲಿದ್ದರೆ ಪೋಷಕರಿಗೆ ಯಾತನೆ. ``ಪೋಷಕರು ತಮ್ಮ ಅಂಗವಿಕಲ ಮಕ್ಕಳನ್ನು ಸಾರ್ವಜನಿಕವಾಗಿ ಹೊರಗೆ ಕರೆದೊಯ್ಯಲು ಹಿಂಜರಿಯುತ್ತಾರೆ. ಏಕೆಂದರೆ ಸಮಾಜವು ತಮ್ಮ ಮಕ್ಕಳನ್ನು ಅವಮಾನಿಸಿದರೆ ಗತಿಯೇನು ಎನ್ನುವ ಕಳವಳ ಪೋಷಕರಲ್ಲಿ ಸದಾ ಇರುತ್ತದೆ'' ಎನ್ನುತ್ತಾರೆ ಅಮೀರ್. ಸಮಾಜ ಹೇಗೆಯೇ ಇರಲಿ, ಮನೆಯಲ್ಲಿ ಅಮೀರ್ ಅವರಿಗೆ ಪೋಷಕರಿಂದ ಅತ್ಯುತ್ತಮ ಬೆಂಬಲ ದೊರೆಯಿತು. ತಮಗಿದ್ದ ನಾಲ್ಕು ಮಕ್ಕಳ ನಡುವೆ ಯಾವುದೇ ಪಕ್ಷಪಾತವನ್ನೂ ಅಮೀರ್ ಅವರ ಪೋಷಕರು ಮಾಡಲಿಲ್ಲ. ಮಕ್ಕಳಿಗೆ, ಅದರಲ್ಲೂ ವಿಶೇಷಚೇತನ ಮಕ್ಕಳಿಗೆ ಶಿಕ್ಷಣ ದೊರೆತರೆ ತಮ್ಮ ಕಾಲ ಮೇಲೆ ತಾವು ಸ್ವತಂತ್ರವಾಗಿ ನಿಂತುಕೊಳ್ಳುತ್ತಾರೆ ಎಂದು ಅಮೀರ್ ನ ಹೆತ್ತವರು ದೃಢವಾಗಿ ನಂಬಿದ್ದರು.

ಹೆತ್ತವರ ಅಭಿಲಾಷೆಗೆ ತಕ್ಕಂತೆ ಅಮೀರ್ ಚೆನ್ನಾಗಿಯೇ ಓದಿದರು. ಶಿಕ್ಷಣದಿಂದಲೇ ಮೋಕ್ಷ ಎಂದು ಗಟ್ಟಿಯಾಗಿ ನಂಬಿದ್ದ ಅಮೀರ್, ಜಬಲ್ಪುರ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಎಂಫಿಲ್ ಮಾಡಿದರು. ಕಂಪ್ಯೂಟರ್ ಅಪ್ಲಿಕೇಷನ್ ಮತ್ತು ಬಿಸಿನೆಸ್ ಅಡ್ಮಿನಿಸ್ಟ್ರೇಶನ್‍ನಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದರು. ಇಷ್ಟಕ್ಕೇ ಸುಮ್ಮನಾಗದೆ, ಈಗ ಕಂಪ್ಯೂಟರ್ ನೆಟ್‍ವರ್ಕ್‍ನಲ್ಲಿ ಪಿಎಚ್‍. ಡಿ ಮತ್ತು ಸಾಮಾಜಿಕ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ! ಆದರೆ ಅವರು ದಣಿದಿಲ್ಲ. ತಮ್ಮ ಓದು ಮತ್ತು ಸಮಾಜಮುಖಿ ಕಾರ್ಯವನ್ನು ಮುಂದುವರಿಸಿದ್ದಾರೆ. ವಿಕಲಾಂಗದ ವ್ಯಕ್ತಿಗಳ (ಪರ್ಸನ್ಸ್ ವಿತ್ ಡಿಸಬಲಿಟೀಸ್-ಪಿಡಬ್ಲ್ಯುಡಿ) ಸಬಲೀಕರಣವಾಗಬೇಕು. ಇಂಥ ವ್ಯಕ್ತಿಗಳಿಗೆ ಅಧಿಕಾರ, ಸ್ಥಾನಮಾನಗಳು ಸಿಗಬೇಕು ಎಂದು ಬಯಸುತ್ತಾರೆ. ಅಮೀರ್ ಅವರ ಮುಖ್ಯ ಉದ್ದೇಶವೆಂದರೆ ಜಾಗೃತಿ ಉಂಟುಮಾಡುವುದು. ವಿಶೇಷಚೇತನರಿಗೆಲ್ಲಾ ಶಿಕ್ಷಣ ದೊರೆಯುವಂತೆ ಮಾಡಲು ಜಾಗೃತಿ ಮೂಡಿಸುವುದು ಅವರ ಗುರಿ.

ಆರು ವರ್ಷಗಳ ಹಿಂದೆ ಉದ್ಯೋಗ ನಿರೀಕ್ಷೆಯೊಂದಿಗೆ ಜಬಲ್ಪುರದಿಂದ ದೆಹಲಿಗೆ ಬಂದ ಅಮೀರ್, ಆ ಸಂದರ್ಭದಲ್ಲಿ ರೆಟ್ರೊಫಿಟ್ ಸ್ಕೂಟರ್ ಖರೀದಿಸಿದರು. ಶೀಘ್ರದಲ್ಲೇ, ವಿಶೇಷಚೇತನರ ಜಾಗೃತಿಗಾಗಿ ಪ್ರವಾಸವನ್ನೂ ಆರಂಭಿಸಿದರು. ವಿಶೇಷಚೇತನರಿಗೆ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಅವರ 16 ಈಗಲ್ ರೈಡರ್ಸ್ ತಂಡವು 2019ರ ಅಕ್ಟೋಬರ್ ನಲ್ಲಿ ದಿಲ್ಲಿಯಿಂದ ಮುಂಬಯಿ ನಡುವಿನ 14 ನಗರಗಳಿಗೆ ಹೋಗಿದೆ. 3,500 ಕಿ.ಮೀನ ಈ ಆಂದೋಲನ ಹೆಚ್ಚಿನ ಮಹತ್ವ ಪಡೆದಿದೆ. ಮಾರ್ಗ ಮಧ್ಯೆ ತಂಗುವ ಸ್ಥಳಗಳಲ್ಲೆಲ್ಲ ಇವರ ತಂಡವು ವಿಶೇಷಚೇತನರಿಗೆ ಸಂಬಂಧಿಸಿದ ಸಂಘಟನೆಗಳ ಜತೆ ನಂಟು ಸಾಧಿಸಿದೆ. ಅವರು ವಿಶೇಷಚೇತನರನ್ನು ಸೇರಿಸಿದಾಗ ಅಮೀರ್ ತಂಡವು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದೆ. ವಿಶೇಷಚೇತನರ ಸಬಲೀಕರಣ, ಸಮಾಜದಲ್ಲಿ ಬೆರೆಯುವ ಬಗೆಗೆ ಭಾಷಣ ಮಾಡುತ್ತಾ, ವಿಶೇಷಚೇತನರ ಸಂದೇಹಗಳನ್ನು ನಿವಾರಿಸುವ ಕೆಲಸವನ್ನು ಅಮೀರ್ ಶ್ರದ್ಧೆ ಮತ್ತು ಉತ್ಸಾಹದಿಂದ ಮಾಡುತ್ತಾ ಬಂದಿದ್ದಾರೆ. ತಮ್ಮ ಹಕ್ಕುಗಳಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಿದ್ದಾರೆ.

ಸಮಾಜದಲ್ಲಿ ವಿಶೇಷಚೇತನರಿಗೆ ಕೆಲವು ರಿಯಾಯಿತಿ ಮತ್ತು ಸೌಲಭ್ಯಗಳು ಇವೆ. ಆದರೆ, ಅವುಗಳನ್ನು ಪಡೆಯಲು ಅಂಗವೈಕಲ್ಯದ ಪ್ರಮಾಣಪತ್ರಗಳು ಬೇಕು. ಸರಕಾರಿ ಕಚೇರಿಗಳಿಗೆ ಅಲೆದಾಡಿ ಅವುಗಳನ್ನು ಪಡೆಯುವುದೊಂದು ಕಿರಿಕಿರಿಯ ಕೆಲಸ. ದಿಲ್ಲಿಯಲ್ಲಿ ವಿಶೇಷಚೇತನರು ಅಂಗವೈಕಲ್ಯದ ಪ್ರಮಾಣಪತ್ರವನ್ನು ಪಡೆಯಲು ಅಮೀರ್ ಅವರು ಸಹಾಯ ಮಾಡುತ್ತಿದ್ದಾರೆ. ಸಾಂಕ್ರಾಮಿಕ ರೋಗ ವ್ಯಾಪಕಗೊಂಡಿದ್ದ ಸಂದರ್ಭದಲ್ಲಿ ಅಮೀರ್ ಅವರ ಈಗಲ್ ರೈಡರ್ಸ್ ತಂಡವು ವಿಶೇಷಚೇತನರಿಗೆ ಆಹಾರ, ದಿನಸಿ, ಹಣ, ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ವಿತರಿಸಿದೆ. ಅಗತ್ಯ ಇರುವವರಿಗೆ ಔಷಧಗಳನ್ನೂ ಮನೆಬಾಗಿಲಿಗೆ ತಲುಪಿಸಿದೆ.

‘ಅತ್ಯಾಚಾರ ಮುಕ್ತ ಭಾರತ’ಕ್ಕಾಗಿ ಹಂಬಲಿಸಿರುವ ಅಮೀರ್ ಈ ನಿಟ್ಟಿನ ಆಂದೋಲನದ ಸಲುವಾಗಿ 3,000 ಕಿ.ಮೀ ಸವೆಸಿದ್ದಾರೆ. 2020ರ ಡಿಸೆಂಬರ್‍ ನಲ್ಲಿ ಅವರು ಇಂಥದ್ದೊಂದು ಹೊಸ ದಾಖಲೆ ಮಾಡಿದ್ದಾರೆ. ಹೌದು, ವಿಶೇಷಚೇತನರ ಪೈಕಿ ಇದೇ ದೀರ್ಘವಾದ ಏಕವ್ಯಕ್ತಿ ಸವಾರಿಯಾಗಿದೆ. ಸಾಧನೆಗೆ ಕೊನೆ ಎಲ್ಲಿ? ಎಂಬಂತೆ ಅವರು ಮುಂದಿನ ಸಾಹಸಕ್ಕೆ ಸಜ್ಜಾಗುತ್ತಿದ್ದಾರೆ. ಅವರು ಈ ವರ್ಷ ತಮ್ಮ ಮುಂದಿನ ಏಕವ್ಯಕ್ತಿ ಬೈಕ್ ದಂಡಯಾತ್ರೆಯನ್ನು ಯೋಜಿಸುತ್ತಿದ್ದಾರೆ. ನೇಪಾಳ ಮತ್ತು ಭೂತಾನ್‍ನ 4,500 ಕಿ.ಮೀ ದೂರದ ಬೈಕ್ ಸವಾರಿ ಮೂಲಕ ನೇತ್ರದಾನದ ಜಾಗೃತಿ ಅಭಿಯಾನ ನಡೆಸುವ ಉದ್ದೇಶ ಹೊಂದಿದ್ದಾರೆ. ‘ನೇತ್ರದಾನ್ ಮಹಾದಾನ್’ ಎನ್ನುವ ಸ್ಲೋಗನ್‍ನೊಂದಿಗೆ ಅವರ ಬೈಕ್ ಯಾತ್ರೆ ಆರಂಭವಾಗಲಿದೆ.

Photos:

Vicky Roy